ಸಂತ ಮೇರಿ ಬೆಸಿಲಿಕಾ ಬೆಂಗಳೂರಿನ ಶಿವಾಜಿನಗರ ಬಸ್ ನಿಲ್ದಾಣದ ಬದಿಯಲ್ಲೇ ಇರುವ ಪ್ರಾಚೀನ ಹಾಗು ಬೆಂಗಳೂರಿನ ಅತ್ಯಂತ ಹಳೆಯ ಚರ್ಚ್ ಆಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಇಲ್ಲಿ ನಡೆಯವ ಜಾತ್ರೆ ಅತ್ಯಂತ ಹೆಸರುವಾಸಿ ಯಾಗಿದ್ದು, ಹಬ್ಬಕ್ಕೆ ಮುಂಚಿನ ಎಂಟು ದಿನಗಳಲ್ಲೂ ಭಕ್ತರ ಯಾತ್ರೆ ಇರುತ್ತದೆ. ಇಡೀ ದಿನ ಎಲ್ಲೆಲ್ಲಿಂದಲೋ ಬಂದ ಭಕ್ತರ ಮಹಾಪೂರ ಸಂಜೆಯಾಗುತ್ತಿದ್ದಂತೆಯೇ ಉತ್ತುಂಗಕ್ಕೇರುತ್ತದೆ. ಮೇರಿ ಮಾತೆಗೆ ಹರಕೆಯೊಪ್ಪಿಸಲು ಏನೆಲ್ಲ ವೇಷಗಳು. ಇತ್ತೀಚೆಗಂತೂ ಕಾವಿಯ ಭರಾಟೆ ಜೋರಾಗಿದೆ. ಕಾವಿಯ ಶರ್ಟು ಪೈಜಾಮ, ಕಾವಿಯ ಸೀರೆ, ಕಾವಿಯ ಸೆಲ್ವಾರ್ ಕಮಿಜ್ ಗಳನ್ನು ತೊಟ್ಟವರ ಸಂಖ್ಯೆ ಬಹಳವಾಗಿದೆ. ಇಷ್ಟಾರ್ಥ ಕೈಗೂಡಲೆಂದೋ, ಕೆಲಸ ಸಿಗಲೆಂದೋ, ಮಕ್ಕಳಾಗಲೆಂದೋ, ಒಟ್ಟಿನಲ್ಲಿ ಯಾವುದೋ ನೆಪದಿಂದ ಜನ ಇಲ್ಲಿ ಧಾವಿಸಿ ಬರುತ್ತಾರೆ. ಮೋಂಬತ್ತಿ ಹಿಡಿದು ಸರತಿ ಸಾಲಿನಲ್ಲಿ ನಿಂತು ಮೇರಿ ಮಾತೆಯ ದರ್ಶನ ಪಡೆಯುತ್ತಾರೆ. ಕೆಲವರು ಉರುಳು ಸೇವೆಯನ್ನೂ ಮಾಡುತ್ತಾರೆ. ಕೆಲವರಂತೂ ಸಮೂಹಸನ್ನಿಗೊಳಗಾದವರಂತೆ ಭಿಕ್ಷುಕರ ಸಾಲಿನಲ್ಲಿ ನಿಂತು ಭಿಕ್ಷೆಯನ್ನೂ ಬೇಡುತ್ತಾರೆ. == ಇತಿಹಾಸ == ಕ್ರಿಸ್ತಶಕ ೧೬೪೮ರಲ್ಲಿ ಅಂದಿನ ಮೈಸೂರು ದೇಶದ ರಾಜಧಾನಿಯಾದ ಶ್ರೀರಂಗಪಟ್ಟಣಕ್ಕೆ ಕ್ರೈಸ್ತಧರ್ಮ ಕಾಲಿರಿಸಿದಾಗ ಬೆಂಗಳೂರು ಹೇಳಿಕೊಳ್ಳುವಂಥ ದೊಡ್ಡ ಪಟ್ಟಣವೇನೂ ಆಗಿರಲಿಲ್ಲ. ಬೆಂಗಳೂರಿನ ಮೊತ್ತ ಮೊದಲ ಚರ್ಚ್ ಅನ್ನು ಕಲಾಸಿಪಾಳ್ಯದಲ್ಲಿ ಹೈದರಾಲಿಯ ಕಾಲದಲ್ಲೇ ಅಂದರೆ ಸುಮಾರು ಕ್ರಿಸ್ತಶಕ ೧೭೨೪-೨೫ರಲ್ಲಿ ಕಟ್ಟಲಾಗಿತ್ತಾದರೂ ಟಿಪ್ಪುಸುಲ್ತಾನನ ಆಳ್ವಿಕೆಯ ಅವಧಿಯಲ್ಲಿ ವಿದೇಶೀ ಪಾದ್ರಿಗಳು ಇಲ್ಲಿರಲು ಹಿಂಜರಿದರು. ಹಾಗಾಗಿ ೧೮ನೇ ಶತಮಾನದ ಮೈಸೂರು ಸೀಮೆಯ ಕ್ರೈಸ್ತ ಸಮುದಾಯದ ಇತಿಹಾಸ ಕ್ರಿಸ್ತಶಕ ೧೭೯೯ ರವರೆಗೆ ಕತ್ತಲಿನಲ್ಲಿದೆ. ಟಿಪ್ಪುಸುಲ್ತಾನನ ಮರಣಾ ನಂತರ ಫ್ರೆಂಚ್ ಪಾದ್ರಿ ಅಬ್ಬೆದ್ಯುಬುವಾರವರ ಆಗಮನದೊಂದಿಗೆ ಕ್ರೈಸ್ತಧರ್ಮದ ಪುನರುಜ್ಜೀವನ ಕಾರ್ಯ ನಡೆಯಿತು. ಮೈಸೂರು ಸೀಮೆಯಲ್ಲಿ ಪ್ರಥಮ ಬಾರಿಗೆ ಸಿಡುಬು ನಿರೋಧಕ ಲಸಿಕೆಯನ್ನು ಪರಿಚಯಿಸಿದ ಅಬ್ಬೆದ್ಯುಬುವಾರವರು ಸೋಮನಹಳ್ಳಿ, ಕಾಮನಹಳ್ಳಿ, ಬೇಗೂರು, ಗಂಜಾಂ, ಪಾಲಳ್ಳಿ, ದೋರನಹಳ್ಳಿ, ಗಾರೇನಹಳ್ಳಿ, ಶೆಟ್ಟಿಹಳ್ಳಿ ಮುಂತಾದೆಡೆಗಳಲ್ಲಿದ್ದ ಕ್ರೈಸ್ತ ಗುಡಿಗಳನ್ನು ಸಂದರ್ಶಿಸುತ್ತಿದ್ದರು. ಈ ಸಂದರ್ಭದಲ್ಲಿಯೇ ಅವರು ಬರೆದ ಸಂಶೋಧನಾತ್ಮಕ ಪುಸ್ತಕ , ಬೆಳಕು ಕಂಡಿತು. ಅವರ ಪೂಜಾರ್ಪಣೆಯ ವೇಳೆ ಧರಿಸುತ್ತಿದ್ದ ಧಾರ್ಮಿಕ ಉಡುಗೆ ತೊಡುಗೆಗಳನ್ನು ಶ್ರೀರಂಗಪಟ್ಟಣದ ಬಳಿಯ ಗಂಜಾಮಿನ ಅಮಲೋದ್ಭವಿ ಮಾತೆಯ ಚರ್ಚಿನಲ್ಲಿ ಇಂದಿಗೂ ಸಂರಕ್ಷಿಸಿಡಲಾಗಿದೆ. ಅಬ್ಬೆದ್ಯುಬುವಾ ಅವರ ಪ್ರಯತ್ನದಿಂದ ಸುಮಾರು ಕ್ರಿಸ್ತಶಕ ೧೮೦೩ ರಲ್ಲಿ ಇಂದು ಶಿವಾಜಿನಗರ ಎನಿಸಿಕೊಂಡಿರುವ ಬಿಳೇಕನಹಳ್ಳಿ (ಬಿಳಿ ಅಕ್ಕಿ ಹಳ್ಳಿ) ಎಂಬ ಪುಟ್ಟ ಊರಿನಲ್ಲಿ ತೆಂಗಿನ ಗರಿಯ ಸೂರು ಹೊದ್ದ ಪುಟ್ಟ ಚರ್ಚೊಂದು ತಲೆಯೆತ್ತಿತು. ಕ್ರಿಸ್ತಶಕ ೧೮೧೩ರಲ್ಲಿ ಬ್ರಿಟಿಷರು ತಮ್ಮ ನೌಕರರ ಬಳಕೆಗಾಗಿ ಈ ಬಿಳೇಕಹಳ್ಳಿಯ ಚರ್ಚ್ ನ್ನು ಮೇಲ್ದರ್ಜೆಗೇರಿಸಿದರು. (ಮೇರಿಪ್ರತಿಮೆ ಇರುವ ಹಳೆಯ ದೇವಸ್ಥಾನದ ಮುಂಭಾಗದಲ್ಲಿ ಇತ್ತೀಚಿನವರೆಗೂ '೧೮೧೩' ಎಂದು ಕೆತ್ತಿರುವುದನ್ನು ಕಾಣಬಹುದಿತ್ತು). ಅಂದಿನಿಂದ ಆ ಚರ್ಚು , (ಶುದ್ಧೀಕರಣ ತಾಯಿಯ ಗುಡಿ) ಎಂದು ಕರೆಸಿಕೊಂಡಿತು. ಆ ಸ್ಥಳದಲ್ಲಿ ಬಹುಸಂಖ್ಯೆಯಲ್ಲಿದ್ದ ತಿಗುಳ ಜನಾಂಗಕ್ಕೆ ಸೇರಿದ ಕ್ರೈಸ್ತರು ಬಿಳೇಕಹಳ್ಳಿಯನ್ನು ಬಿಳೇಕನಪಳ್ಳಿ ಎನ್ನುತ್ತಿದ್ದರಿಂದಲೂ ಫ್ರೆಂಚ್ ಪಾದ್ರಿಗಳು ಪಾಂಡಿಚೇರಿಯಲ್ಲಿ ತರಬೇತಿ ಪಡೆದು ಬಂದವರಾಗಿದ್ದರಿಂದಲೂ ಅವರು ಬರೆದ ದಾಖಲೆಗಳಲ್ಲಿ ಬ್ಲ್ಯಾಕ್ ಪಳ್ಳಿ ಎಂದು ನಮೂದಾಗಿರುವುದು ಸಹಜ. ಕ್ರಿಸ್ತಶಕ ೧೮೩೨ರಲ್ಲಿ ಜನಾಂಗ ಸಂಘರ್ಷ ನಡೆದು ಚರ್ಚ್ ಕಟ್ಟಡ ನೆಲಸಮವಾಯಿತೆಂದು ದಾಖಲಾಗಿದೆಯಲ್ಲದೆ ಕ್ರಿಸ್ತಶಕ ೧೮೫೬ರಿಂದ ೧೮೮೨ರವರೆಗೆ ಈ ಚರ್ಚ್ ಅನ್ನು (ಕಾಣಿಕೆ ಮಾತೆಯ ದೇವಾಲಯ) ಎಂದು ಕರೆಯಲಾಗಿದೆ. == ವಾಸ್ತುಶಿಲ್ಪ == ಫಾದರ್ ಕ್ಲೈನರ್ ಎಂಬುವರು ಕ್ರಿಸ್ತಶಕ ೧೮೭೫-೮೨ರ ಅವಧಿಯಲ್ಲಿ ಈಗಿರುವ ಭವ್ಯ ಚರ್ಚ್ ಅನ್ನು ಕಟ್ಟಿದರು. ಇದು ಬೆಂಗಳೂರಿನ ಮೊತ್ತ ಮೊದಲ ಗೋಥಿಕ್ ಶೈಲಿಯ ಚರ್ಚ್ ಆಗಿದ್ದು ಒಳಗಿನ ಕಂಬಗಳಲ್ಲಿ ದ್ರಾಕ್ಷಾಬಳ್ಳಿಯ ಉಬ್ಬು ಚಿತ್ತಾರವಿದೆ. ಪೂಜಾಪೀಠದ ಹಿಂದಿನ ಗೋಡೆಯಲ್ಲಿ ತಂದೆ ತಾಯಿಯರೊಂದಿಗೆ ಯೇಸುಕ್ರಿಸ್ತನಿರುವ ವರ್ಣಸಂಯೋಜನೆಯ ಗಾಜಿನ ಫಲಕವಿದೆ. ಬದಿಯ ಗೋಡೆಗಳ ಮೇಲುಗಡೆಯೂ ವಿವಿಧ ಚಿತ್ತಾರಗಳ ಗಾಜಿನ ಫಲಕಗಳನ್ನು ಜೋಡಿಸಲಾಗಿದೆ. ಚರ್ಚು ಶಿಲುಬೆಯಾಕಾರದ ನೆಲಗಟ್ಟಿನಲ್ಲಿದ್ದು ಹಿಂದಿನ ಕಾಲದಲ್ಲಿ ಪೀಠದ ಎದುರಿನ ಅಂಕಣ ನಿಮ್ನವರ್ಗದವರಿಗೂ, ಅಡ್ಡರೆಕ್ಕೆಗಳು ಮೇಲ್ವರ್ಗದವರಿಗೂ ವಿದೇಶೀಯರಿಗೂ ಸ್ಥಾನ ಕಲ್ಪಿಸುತ್ತಿದ್ದವು. ಅಂದು ಈ ಚರ್ಚು ಕಟ್ಟಲು ೨೯,೬೫೯ ರೂಪಾಯಿಗಳು ಖರ್ಚಾದವು. ಈ ನೂತನ ಚರ್ಚನ್ನು ಕ್ರಿಸ್ತಶಕ ೧೮೮೨ನೇ ಡಿಸೆಂಬರ್ ತಿಂಗಳ ೮ ನೇ ತಾರೀಕು ಬಿಷಪ್ ಕಾಡೋ ಅವರು ೩೫ ಪಾದ್ರಿಗಳು ಮತ್ತು ಸುಮಾರು ೪೦೦೦ ಕ್ರೈಸ್ತಭಕ್ತರ ಸಮ್ಮುಖದಲ್ಲಿ ಪ್ರತಿಷ್ಠಾಪನೆ ಮಾಡಿ ಚರ್ಚಿಗೆ (ಮರಿಯಾ ಮಾತೆಯ ಜನನೋತ್ಸವದ ಗುಡಿ) ಎಂದು ಹೆಸರಿಟ್ಟರು. == ಅದ್ಭುತ ಪ್ರತಿಮೆ == ಅಂದು ಇಟಲಿ ದೇಶದಿಂದ ತರಿಸಿ ಸ್ಥಾಪಿಸಿದ ಮೇರಿಮಾತೆಯ ಸುಂದರ ಪ್ರತಿಮೆಯೇ ಇಂದು ಕ್ರೈಸ್ತರನ್ನು ದೇಶದೆಲ್ಲೆಡೆಯಿಂದ ಕೈಬೀಸಿ ಕರೆಯುತ್ತಿರುವ, ಅವರ ಇಷ್ಟಾರ್ಥಗಳನ್ನು ಈಡೇರಿಸುವ ಅತ್ಯಾಕರ್ಷಕವಾದ ಪವಾಡ ಪ್ರತಿಮೆ. ಮೂಲ ಪ್ರತಿಮೆಯಲ್ಲಿ ಮೇರಿಯ ಸೌಂದರ್ಯ ಇಟಾಲಿ ಯನ್ ದಿರುಸಿನಲ್ಲಿ ಕಂಗೊಳಿಸುತ್ತಿದ್ದರೆ ಇಲ್ಲಿ ಆಕೆ ಭಾರತನಾರಿಯ ಸಲ್ಲಕ್ಷಣ ಉಡುಪಾದ ಸೀರೆಯನ್ನುಟ್ಟು ನಯನ ಮನೋಹರವಾಗಿ ನಿಂತಿದ್ದಾಳೆ. ಆಕೆ ಎಡ ತೋಳಲ್ಲಿ ಹಸನ್ಮುಖಿ ಬಾಲಕ ಯೇಸು ವಿರಾಜಮಾನನಾಗಿದ್ದಾನೆ. ಭಕ್ತಾದಿಗಳು ಅರ್ಪಿಸಿದ ಬಂಗಾರದಿಂದ ತಯಾರು ಮಾಡಲಾದ ಕಿರೀಟಗಳು ಇವರಿಬ್ಬರ ತಲೆಗಳನ್ನು ಅಲಂಕರಿಸಿವೆ. ಮೇರಿ ಮಾತೆಯ ಬಲಗೈಯಲ್ಲಿ ಐವತ್ಮೂರು ಮಣಿಗಳ ಜಪಮಾಲೆ ತೂಗುತ್ತಿದೆ. ಭಕ್ತರು ಎಷ್ಟೇ ಪಾಪಿಷ್ಟರಾದರೂ ದೇವರ ಶಿಕ್ಷೆಗೆ ಗುರಿಯಾಗದಂತೆ ಈ ಮಮತಾಮಯಿ ತಾಯಿ ಉದ್ಧರಿಸುತ್ತಾಳೆಂದು ಭಾವಿಸಲಾಗುತ್ತದೆ. ಅಲ್ಲದೆ ಮೇರಿ ಮಾತೆ ಶುಭಪ್ರಸನ್ನಳಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ದಯಪಾಲಿಸುತ್ತಾಳೆಂಬುದು ಭಕ್ತರ ನಂಬಿಕೆ. ಅದಕ್ಕಾಗಿಯೇ ಆಕೆಯನ್ನು ಆರೋಗ್ಯಮಾತೆ ಎಂದು ಗೌರವಿಸುತ್ತಾರೆ. ತಮ್ಮ ಪ್ರೀತಿ ಗೌರವ ಮತ್ತು ಭರವಸೆಗಳ ಪ್ರತೀಕವಾಗಿ ಮೇಣದ ಬತ್ತಿಗಳನ್ನು ಉರಿಸುತ್ತಾ ಪ್ರಾರ್ಥನೆ ಮಾಡುತ್ತಾ ಹೂಗಳನ್ನು ಅರ್ಪಿಸುತ್ತಾರೆ. == ಆಡಳಿತ == ಬೆಂಗಳೂರಿನ ಪ್ರೇಕ್ಷಣೀಯ ಸ್ಥಳಗಳಲ್ಲೊಂದಾದ ಈ ಸಂತ ಮೇರಿ ಚರ್ಚ್ ಕ್ರಿಸ್ತಶಕ ೧೯೭೩ರಲ್ಲಿ (ಆರೋಗ್ಯಮಾತೆಯ ದೇವಾಲಯ) ಎಂಬ ಹೆಸರು ಪಡೆದು ತನ್ನ ಪ್ರಸಿದ್ಧಿಯ ಕಾರಣ ಕ್ರೈಸ್ತ ಜಗದ್ಗುರುಗಳಾದ ಆರನೇ ಚಿನ್ನಪ್ಪ ಅವರ ಪೀಠದಿಂದ ಕಿರಿಯ ಬೆಸಿಲಿಕಾ ( = ಮಹಾದೇವಾಲಯ) ಎಂಬ ಬಿರುದಿಗೆ ಪಾತ್ರವಾಗಿದೆ. ಚರ್ಚಿನಲ್ಲಿ ಕ್ರೈಸ್ತ ದೀಕ್ಷೆ ಪಡೆದವರ ವಿವರಗಳನ್ನು ದಾಖಲಿಸುವ ಕುರಿತಂತೆ ಇಂದು ಲಭ್ಯವಿರುವ ದಸ್ತಾವೇಜು ಕ್ರಿಸ್ತಶಕ ೧೮೪೪ರಿಂದೀಚೆಗಿನ ಎಲ್ಲ ಅಂದರೆ ವ್ಯಕ್ತಿಯ ಮೂಲ ಹೆಸರು, ದೀಕ್ಷೆಯ ನಂತರದ ಹೆಸರು, ಮಾತೃಭಾಷೆ, ಕುಲ, ಅಂತಸ್ತು, ಕಸುಬು, ಮೂಲನೆಲೆ ಹಾಗೂ ಪ್ರಸಕ್ತ ನಿವಾಸಗಳ ವಿವರಗಳನ್ನು ಒಳಗೊಂಡಿದ್ದು ಇಲ್ಲಿನ ಮೂಲನಿವಾಸಿಗಳ ಹಾಗೂ ಅಂದು ಬ್ರಿಟಿಷರೊಂದಿಗೆ ಮದ್ರಾಸಿನಿಂದ ವಲಸೆ ಬಂದು ಅವರ ಅಡಿಗೆಯವರಾಗಿ, ಮಾಲಿಯಾಗಿ, ಸಿಪಾಯಿಯಾಗಿ ಚೇರಿಗಳಲ್ಲೋ ಬ್ಯಾರಕುಗಳಲ್ಲೋ ವಾಸವಿದ್ದವರ ವಿವರವನ್ನು ನೀಡುತ್ತದೆ. ಇಂದು ಚರ್ಚು ಮತ್ತು ಪುಣ್ಯಕ್ಷೇತ್ರಗಳು ಎರಡು ಬೇರೆ ಬೇರೆ ಪಾದ್ರಿಗಳ ಉಸ್ತುವಾರಿಯಲ್ಲಿ ಸೇವೆ ಸಲ್ಲಿಸುತ್ತಿದೆ. == ಪೂಜಾಸಮಯ ==